ಭಾರತದ ಹಕ್ಕಿಗಳ ವೈವಿಧ್ಯ ತೀವ್ರ ಗತಿಯಿಂದ ಕ್ಷೀಣಿಸುತ್ತಿದೆ. ಅವನ್ನು ಉಳಿಸಲು, ತುರ್ತು ಸಂರಕ್ಷಣಾ ಕ್ರಮಗಳು ಅಗತ್ಯ ಎನ್ನುತ್ತದೆ ಇತ್ತೀಚೆಗೆ ಪ್ರಕಟವಾದ ಭಾರತೀಯ ಹಕ್ಕಿಗಳ ಸ್ಥಿತಿಗತಿಯ ಕುರಿತ ಒಂದು ಸಂಶೋಧನಾ ವರದಿ. ಭಾರತವು ಜೀವಿವೈವಿಧ್ಯದ ಆಗರ ಎನ್ನುವುದರಲ್ಲಿ ಎರಡು ಮಾತಿಲ್ಲ. ಜೀವಿವೈವಿಧ್ಯ ಅಗಾಧವಾಗಿರುವ ಹದಿನೇಳು ರಾಷ್ಟ್ರಗಳಲ್ಲಿ ಭಾರತವೂ ಒಂದು. ಪ್ರಪಂಚದಲ್ಲಿ ದಾಖಲಾಗಿರುವ ಎಲ್ಲ ಪ್ರಭೇದದ ಜೀವಿಗಳಲ್ಲಿ ಶೇಕಡ ಏಳರಿಂದ ಎಂಟರಷ್ಟಕ್ಕೆ ನೆಲೆ ಭಾರತ. ಅಲ್ಲದೆ ಪ್ರಪಂಚದಲ್ಲಿರುವ ಮೂವತ್ತನಾಲ್ಕು ಜೀವಿವೈವಿಧ್ಯದ ಸಿರಿನೆಲೆಗಳಲ್ಲಿ ನಾಲ್ಕು, ಹಿಮಾಲಯ, ಇಂಡೋ ಬರ್ಮಾ, ಪಶ್ಚಿಮ ಘಟ್ಟಗಳು ಹಾಗೂ ಸುಂದರಬನ, ಭಾರತದಲ್ಲಿಯೇ ಇರುವಂಥವು. ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಿಗೆ ವಿಶಾಲವಾದ ನೆಲೆ ಎನ್ನಿಸಿಕೊಂಡ ಭಾರತದಲ್ಲಿ ನಲವತ್ತೇಳು ಸಾವಿರಕ್ಕೂ ಮಿಗಿಲಾದ ಸಸ್ಯ ಪ್ರಭೇದಗಳು ಹಾಗೂ ತೊಂಭತ್ತಾರು ಸಾವಿರ ಪ್ರಾಣಿ ಪ್ರಭೇದಗಳಿವೆ. ಆದರೆ, ಅವಿರತ ಅಭಿವೃದ್ಧಿಯ ಚಟುವಟಿಕೆಗಳು, ನೆಲೆನಷ್ಟ ಮತ್ತು ಹವಾಮಾನದ ಬದಲಾವಣೆಗಳೇ ಮೊದಲಾದವು ಹಲವು ಪ್ರಭೇದಗಳನ್ನು ಅಳಿವನಿಂಚಿಗೆ ದೂಡಿವೆ. ಅದರಲ್ಲಿಯೂ ಹಕ್ಕಿಗಳ ಪಾಡು ಕೆಟ್ಟದಾಗಿದೆ ಎನ್ನುತ್ತದೆ ಈ ವರದಿ.
ಬೆಂಗಳೂರಿನ ನೇಚರ್ ಕನ್ಸರ್ವೇಷನ್ ಫೌಂಡೇಶನ್, ನ್ಯಾಶನಲ್ ಸೆಂಟರ್ ಪಾರ್ ಬಯಾಲಾಜಿಕಲ್ ಸೈನ್ಸಸ್, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಸ್ಟೇಟ್ ಆಫ್ ಇಂಡಿಯಾಸ್ ಬರ್ಡ್ಸ್ ಪಾರ್ಟ್‌ನರ್‌ಶಿಪ್ ಸಂಘಟನೆ, ತಿರುಪತಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಪ್ ಸೈನ್ಸ್ ಎಜುಕೇಶನ್ ಅಂಡ್ ರೀಸರ್ಚ್ ಅಥವಾ ಐಸರ್ ತಿರುಪತಿ, ಕೊಯಂಬತ್ತೂರಿನ ಸಲೀಂ ಅಲಿ ಸೆಂಟರ್ ಫಾರ್ ಆರ್ನಿತಾಲಜಿ ಅಂಡ್ ನ್ಯಾಚುರಲ್ ಹಿಸ್ಟರಿ, ಡೆಹರಾಡೂನಿನಲ್ಲಿರುವ ವೈಲ್ಡ್‌ಲೈಫ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಬೆಂಗಳೂರಿನ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸಿದ್ಧಪಡಿಸಿರುವ ಈ ವರದಿ, ಭಾರತದ ಹಕ್ಕಿಗಳ ಸ್ಥಿತಿಗತಿಗಳ ಬಗ್ಗೆ ಕೂಲಂಕಷವಾಗಿ ಕಣ್ಣಾಡಿಸಿದೆ. ಅವುಗಳು ದೀರ್ಘಕಾಲ ಉಳಿಯಲು ಅಗತ್ಯವಾದ ಅಂಶಗಳ ಬಗ್ಗೆ ಅರಿವು ನೀಡುತ್ತದೆ.
ಭಾರತದಲ್ಲಿರುವ ಹಲವಾರು ಹಕ್ಕಿಗಳ ಸ್ಥಿತಿ ಕಾಳಜಿಯುಂಟು ಮಾಡುವಂಥದ್ದು ವರದಿಯಲ್ಲಿ ಅಧ್ಯಯನ ಮಾಡಿದ ಒಂಬೈನೂರ ನಲವತ್ತೆರಡು ಹಕ್ಕಿ ಪ್ರಭೇದಗಳಲ್ಲಿ, ಇನ್ನೂರ ನಾಲ್ಕರಷ್ಟು ಪ್ರಭೇದಗಳು ದೀರ್ಘಾವಧಿಯಲ್ಲಿ ಕ್ಷೀಣಿಸಿವೆ. ನೂರ ನಲವತ್ತೆರಡು ಪ್ರಭೇದಗಳು ಇಂದಿಗೂ ಸಂಖ್ಯೆಯಲ್ಲಿ ಕುಗ್ಗುತ್ತಿವೆ. ಇತರೆ ಪ್ರಾಣಿಗಳು ಹಾಗೂ ಕೀಟಗಳೇ ಆಹಾರವಾಗಿರುವಂತಹ ಹಕ್ಕಿಗಳು ದೀರ್ಘಾವಧಿಯಲ್ಲಿ ಗಮನಿಸಿದಾಗ ಸಂಖ್ಯೆಯಲ್ಲಿ ಹೆಚ್ಚು ಕುಗ್ಗಿವೆ. ಆದರೆ ಹಣ್ಣು, ಹಂಪಲು ಹಾಗೂ ಮಕರಂದವನ್ನು ಸೇವಿಸಿ ಬದುಕುವ ಪ್ರಭೇದಗಳ ಸಂಖ್ಯೆ ಸ್ವಲ್ಪ ಸ್ಥಿರವಾಗಿ ಉಳಿದಿದೆ. ಇದರ ಅರ್ಥವಿಷ್ಟೆ. ಕೀಟಗಳ ಜನಸಂಖ್ಯೆಗೂ, ಹಲವಾರು ಹಕ್ಕಿಗಳ ಉಳಿವಿಗೂ ಸಂಬಂಧವಿರಬೇಕು.
ಇಷ್ಟೇ ಅಲ್ಲ. ಹುಲ್ಲುಗಾವಲಿನಲ್ಲಿಯೇ ಬದುಕುವ ಹಕ್ಕಿಗಳ ಸಂಖ್ಯೆ ಇತರೆ ನೆಲೆಗಳಲ್ಲಿ ಇರುವ ಹಕ್ಕಿಗಳಿಗಿಂತಲೂ ವೇಗವಾಗಿ ಕ್ಷೀಣಿಸಿದೆ ಎಂದು ವರದಿ ದಾಖಲಿಸಿದೆ. ಇದು ಭಾರತದಲ್ಲಿರುವ ಹುಲ್ಲುಗಾವಲುಗಳ ಸಂರಕ್ಷಣೆಗೆ ತುರ್ತಾಗಿ ಒತ್ತು ನೀಡಬೇಕೆಂದು ಸೂಚಿಸುತ್ತದೆ. ಗ್ಲಾಸಿ ಐಬಿಸ್ ಹಾಗೂ ನವಿಲಿನಂತಹ ಕೆಲವು ಹಕ್ಕಿಗಳ ಸಂಖ್ಯೆ ಅಗಾಧವಾಗಿ ಹೆಚ್ಚಿದೆ ಎನ್ನುವುದು ಈ ಕಾರ್ಮೋಡದಲ್ಲಿ ಕಾಣಿಸಿದ ಬೆಳ್ಳಿ ಮಿಂಚು.
ಕಣ್ನಣಿಗಳೆನ್ನಿಸಿದ ರಣಹದ್ದಿನಂತಹ ಹಲವು ಹಕ್ಕಿಗಳ ಸ್ಥಿತಿಗತಿಯ ವರದಿಯೂ ಕಾಳಜಿ ತರುತ್ತದೆ. ಭಾರತದಲ್ಲಿರುವ ಬಹುತೇಕ ರಣಹದ್ದುಗಳ ಸಂಖ್ಯೆ ಕ್ಷಿಪ್ರವಾಗಿ ಕ್ಷೀಣಿಸುತ್ತಿದೆ. ಭಾರತೀಯ ರಣಹದ್ದಿನ ಸಂಖ್ಯೆಯಂತೂ ಪಾತಾಳಕ್ಕಿಳಿಯುತ್ತಿದೆ. ಬಾತುಕೋಳಿಗಳು, ಜಲಹಕ್ಕಿಗಳೇ ಮೊದಲಾದ ಜೌಗುಪ್ರದೇಶದ ನಿವಾಸಿ ಹಕ್ಕಿಗಳ ಸಂಖ್ಯೆಯೂ ಗುರುತರವಾಗಿ ಕಡಿಮೆಯಾಗಿದೆ. ಛಳಿಗಾಲದಲ್ಲ ಭಾರತಕ್ಕೆ ವಲಸೆ ಬರುವ ಹಕ್ಕಿಗಳ ಸಂಖ್ಯೆ ಇಲ್ಲಿಯೇ ನೆಲೆಯಿರುವ ಹಕ್ಕಿಗಳದ್ದಕ್ಕಿಂತಲೂ ಶೀಘ್ರವಾಗಿ ಕುಸಿಯುತ್ತಿದೆ. ಇವುಗಳಲ್ಲಿ ಧ್ರುವ ಪ್ರದೇಶದಲ್ಲಿ ಮರಿ ಮಾಡುವ ಜಲಹಕ್ಕಿಗಳು ಅತಿಯಾದ ಅಪಾಯಕ್ಕೊಳಗಾದ ಹಕ್ಕಿಗಳು. ಪಶ್ಚಿಮಘಟ್ಟಗಳಂತಹ ಕೆಲವು ನಿರ್ದಿಷ್ಟ ನೆಲೆಗಳಲ್ಲಿಯಷ್ಟೆ ಕಾಣಸಿಗುವ ಹಕ್ಕಿಗಳು ಇತರೆ ಹಕ್ಕಿಗಳಿಗಿಂತಲೂ ವೇಗವಾಗಿ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿವೆ.
ಈ ಎಲ್ಲ ಅರಿವಿಗೂ ಅಗತ್ಯವಾದಂತಹ ಅಗಾಧ ಮಾಹಿತಿಯನ್ನು ಪಡೆಯಲು ಸಂಶೋಧಕರು ಜನರೇ ತೊಡಗಿಕೊಳ್ಳುವ ಜನವಿಜ್ಞಾನ ವಿಧಾನಗಳನ್ನು ಬಳಸಿದರು. ಸಾಧಾರಣವಾಗಿ ನಡೆಸುವ ಸರ್ವೆಗಳ ಬದಲಿಗೆ, ಇಬರ್ಡ್ ಎನ್ನುವ ಜಾಲತಾಣದಲ್ಲಿ ಹಕ್ಕಿಗಳ ಬಗ್ಗೆ ಅಸಕ್ತಿ ಇರುವವರು ಪ್ರತಿ ದಿನವೂ ಅಪ್ಲೋಡ್ ಮಾಡಿದ ಹಕ್ಕಿಗಳ ಚಿತ್ರಗಳನ್ನು ಇವರು ಅಧ್ಯಯನಕ್ಕೆ ಬಳಸಿಕೊಂಡರು. ಇದೊಂದು ದೊಡ್ಡ ಹಕ್ಕಿಗಳನ್ನು ಗುರುತಿಸುವ ಡೈರಿಯಂತೆ. ಇಲ್ಲಿ ಜನ ತಾವು ಕಂಡ ಹಕ್ಕಿಗಳನ್ನು, ಎಲ್ಲಿ, ಎಂದು ಕಂಡೆವೆಂದು ಚಿತ್ರ ಸಮೇತ ದಾಖಲಿಸುತ್ತಾರೆ.
ಹವ್ಯಾಸಿ ಪಕ್ಷಿವೀಕ್ಷಕರು ಒದಗಿಸುವ ಇಂತಹ ಮಾಹಿತಿಯಲ್ಲಿ ಅದರದ್ದೇ ಆದ ಸಮಸ್ಯೆಗಳಿರುತ್ತವೆ. ಆದ್ದರಿಂದ ನೇರವಾಗಿ ವೈಜ್ಞಾನಿಕ ವಿಶ್ಲೇಷಣೆಗೆ ಒದಗಿ ಬರುವುದಿಲ್ಲ. ವೀಕ್ಷಕರ ಪೂರ್ವಾಗ್ರಹವೂ ಅಡ್ಡಿಯಾಗಿರುತ್ತದೆ. ಇದಕ್ಕಾಗಿ ಈ ಮಾಹಿತಿಯನ್ನು ಹಂತ, ಹಂತವಾಗಿ ಪರಿಶೀಲಿಸಿ, ಸ್ವಚ್ಛಗೊಳಿಸುವ ವ್ಯವಸ್ಥೆಯೊಂದನ್ನು ಸಂಶೋಧಕರು ರೂಪಿಸಿದರು. ಈಬರ್ಡ್ ತಾಣದಲ್ಲಿದ್ದ ಹಕ್ಕಿಗಳ ಮಾಹಿತಿಯಲ್ಲಿ ಇರಬಹುದಾದ ನಕಲುಗಳು, ಅನಗತ್ಯವಾದ ವಿವರಗಳನ್ನು ತೆಗೆದು ಹಾಕಿದರು. ವರ್ಷದ ಆರಂಭದಿಂದ ಕೊನೆಯವರೆಗೆ ಪಟ್ಟಿ ಮಾಡುವ ಬದಲಿಗೆ, ವಲಸೆ ಹಕ್ಕಿಗಳ ಜೀವನ ಚಕ್ರವನ್ನು ಬಿಂಬಿಸುವ ಜೂನ್ ಒಂದರಿಂದ ಮುಂದಿನ ವರ್ಷದ ಮೇ ಮೂವತ್ತೊಂದನೆಯ ತಾರೀಕನ್ನು ಅವಧಿಯಾಗಿ ಪರಿಗಣಿಸಿದರು.
ಹಕ್ಕಿಗಳನ್ನು ಎಷ್ಟು ದೂರದಿಂದ ಅಥವಾ ಸಮಯ ನೋಡಲಾಯಿತೆಂಬ ವಿವರಗಳ ಬದಲಿಗೆ, ತಮ್ಮ ಬಳಿ ಇದ್ದ ಪಟ್ಟಿಯಲ್ಲಿದ್ದ ಪಕ್ಷಿಗಳಲ್ಲಿ ವಿಶೇಷವಾದಂಥವುಗಳನ್ನು ಕಾಣಲಾಗಿದೆಯೇ ಎಂದು ಗುರುತಿಸಿದರು. ಇದು ಹೆಚ್ಚು ವಿಶ್ವಾಸಾರ್ಹ ಎನ್ನಿಸಿತು. ಅದೇ ರೀತಿಯಲ್ಲಿ, ಸಾಧಾರಣವಾಗಿ ಕಾಣಬರುವ ನೆಲೆಯಿಂದ ಆಚೆಗೆ ಅಪರೂಪವಾಗಿ ತೋರ್ಪಡುವ ಹಕ್ಕಿಗಳ ವಿವರಗಳನ್ನು ಗುರುತಿಸಿ ತೆಗೆದು ಹಾಕಿದರು. ಈ ಎಲ್ಲ ಕ್ರಮಗಳೂ ನಿರ್ದಿಷ್ಟ ಹಕ್ಕಿಯ ನಿಗದಿತ ನೆಲೆಯಲ್ಲಿ ಇರುವ ಹಕ್ಕಿಗಳ ಸಂಖ್ಯೆ ನಿಖರವಾಗಿರುವಂತೆ ಮಾಡಿದುವು. ತಮ್ಮ ಪಟ್ಟಿಯಲ್ಲಿ ನಿಗದಿ ಪಡಿಸಿದ ಗುಣಮಟ್ಟವಿಲ್ಲದ ಮಾಹಿತಿಯನ್ನು ಅಪೂರ್ಣ ಮಾಹಿತಿ ಎಂದು ಗುರುತಿಸಿದರು. ಹೀಗೆ ಹಕ್ಕಿಗಳ ಪಟ್ಟಿಯನ್ನು ಕಠಿಣ ವಿಮರ್ಶೆಗೆ ಒಳಪಡಿಸಿದರು.
ಹೀಗೆ ಮಾಹಿತಿಯನ್ನು ಶುಚಿಗೊಳಿಸಿದ ನಂತರ, ಸಂಖ್ಯಾಶಾಸ್ತ್ರದ ವಿಧಾನಗಳನ್ನು ಬಳಸಿಕೊಂಡು, ಪ್ರತಿಯೊಂದು ಪ್ರಭೇದವನ್ನೂ ಎಷ್ಟೆಷ್ಟು ಕಾಲಾಂತರದಲ್ಲಿ ವರದಿ ಮಾಢಲಾಗಿದೆ ಎಂದು ಲೆಕ್ಕ ಹಾಕಿದರು. ಅಂದರೆ ಯಾವುದೇ ಪಕ್ಷಿವೀಕ್ಷಕರಿಗೂ ಆ ನೆಲೆಯಲ್ಲಿ ಅ ಹಕ್ಕಿ ಕಾಣುವ ಸಾಧ್ಯತೆ ಎನ್ನುವುದರ ಲೆಕ್ಕ ಇದು. ಈ ಮಾಹಿತಿಯನ್ನು ಆಧರಿಸಿ, ದೀರ್ಘಾವಧಿಯಲ್ಲಿ ಅಂದರೆ ಎರಡು ಸಾವಿರದ ಇಸವಿಯಿಂದ ಇಂದಿನವರೆವಿಗೂ ಆಗಿರುವ ಬದಲಾವಣೆಗಳನ್ನು ಪಟ್ಟಿ ಮಾಡಿದರು. ಈ ವರ್ಷದ ಹಾಗೂ ಇತ್ತೀಚಿನ ಅಂದರೆ ಎರಡುಸಾವಿರದ ಹದಿನೈದರಿಂದ ಎರಡು ಸಾವಿರದ ಇಪ್ಪತ್ತೆರಡರ ವರೆಗಿನ ಬದಲಾವನೆಗಳ ಜೊತೆಗೆ ಹೋಲಿಸಿದರು. ಪ್ರತಿ ಪ್ರಭೇದವೂ ಎಷ್ಟು ವಿಶಾಲವಾಗಿ ಪಸರಿಸಿದೆ ಎನ್ನುವುದನ್ನು ಗುರುತಿಸಲು, ಹಕ್ಕಿಗಳು ವರದಿಯಾಗದ ಆದರೆ ಅವು ಇದ್ದಿರಬಹುದಾದ ಜಾಗಗಳನ್ನೂ ಗುರುತಿಸಿದರು. ಹೀಗೆ ಹಕ್ಕಿಗಳ ನೆಲೆಯ ವಿಸ್ತಾರವನ್ನು ಗುರುತಿಸಿದರು. ಈ ಮೂರೂ ಮಾನಕಗಳನ್ನು ಬಳಸಿಕೊಂಡು ಆಯಾ ಹಕ್ಕಿಗಳನ್ನು ಸಂರಕ್ಷಿಸುವ ಅಗತ್ಯವನ್ನು ಕಡಿಮೆ, ಮಧ್ಯಮ ಹಾಗೂ ಅತಿ ಎಂದು ಗುರುತಿಸಿದರು. ಇದಕ್ಕಾಗಿ ಅವರು ಐಯುಸಿನ್ ಸಂಸ್ಥೆಯ ರೆಡ್ ಪಟ್ಟಿ, ಅರ್ಥಾತ್ ಅಪಾಯ ಸೂಚಕ ಪಟ್ಟಿಯನ್ನು ಬಳಸಿದರು.
ಹೀಗೆ ಜನವಿಜ್ಞಾನ ವಿಧಾನಗಳಿಂದ ದೊರೆತ ಅಪರಿಪೂರ್ಣ ಮಾಹಿತಿಯನ್ನೂ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಬಹುದಾದ ತಂತ್ರವನ್ನು ರೂಪಿಸುವ ಮೂಲಕ ಈ ಹಿಂದೆ ಮಾಡಬಹುದಾದದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕಿಗಳ ಸ್ಥಿತಿಗತಿಗಳ ಅಧ್ಯಯನವನ್ನು ಮಾಡಿದರು. ಇಂತಹ ಅಧ್ಯಯನಗಳಲ್ಲಿ ದೋಷಗಳಿಲ್ಲವೆಂದಲ್ಲ. ಜನರಿಂದ ಮಾಹಿತಿಯನ್ನು ಒಟ್ಟುಗೂಡಿಸಿದರಿಂದಾಗಿ, ನಿಖರವಾದ ಸಂಖ್ಯೆಯನ್ನು ತಿಳಿಯುವುದಾಗಲಿ, ಜನನ ಹಾಗೂ ಮರಣದ ಸಂಖ್ಯೆಗಳನ್ನಾಗಲಿ ತಿಳಿಯುವುದು ಸಾಧ್ಯವಿಲ್ಲ. ಜೊತೆಗೆ ನಿಶಾಚರಿ ಹಾಗೂ ಪರ್ವತಗಳಲ್ಲಿ ಮಾತ್ರ ಕಾಣಸಿಗುವಂತಹ ಹಕ್ಕಿಗಳ ಮಾಹಿತಿಗಳು ಬಹಳ ಕಡಿಮೆ.
ಇಷ್ಟಾದರೂ ಈ ಅಧ್ಯಯನವು ಹಕ್ಕಿಗಳ ಸಂರಕ್ಷಣೆಗೆ ಹೊಸದೊಂದು ಮಾರ್ಗವನ್ನು, ಸಾಧನವನ್ನು ಒದಗಿಸಿದೆ. ಯಾವ್ಯಾವ ಹಕ್ಕಿ ಪ್ರಭೇದಗಳು ಕ್ಷಯಿಸುತ್ತಿವೆ, ಹಾಗೂ ಏಕೆ ಎಂಬುದನ್ನು ಗುರುತಿಸಿ ಅವುಗಳ ಸಂರಕ್ಷಣೆಗೆ ತಕ್ಕ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಉದಾಹರಣೆಗೆ, ಹುಲ್ಲುಗಾವಲಿನ ಹಕ್ಕಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು, ಆ ನೆಲೆಯ ಸಂರಕ್ಷಣೆ ತುರ್ತು ಎಂಬುದನ್ನು ಸೂಚಿಸುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಇದು ಇತರೆ ದೇಶಗಳು ತಮ್ಮಲ್ಲಿರುವ ಹಕ್ಕಿಗಳ ವೈವಿಧ್ಯವನ್ನು ಅಳೆಯಲು ಮಾದರಿಯಾಗಿದೆ. ಈ ಜನವಿಜ್ಞಾನ ಅಥವಾ ಸಿಟಿಜನ್ ಸೈನ್ಸ್ ವಿಧಾನದಲ್ಲಿ ವಿಜ್ಞಾನಿಗಳ ಜೊತೆಗೆ ಜನತೆಯೂ ಕೈಗೂಡಿಸಿ, ಭಾರತದ ಹಕ್ಕಿ ಸಂಕುಲವನ್ನು ಸಂರಕ್ಷಿಸಲು ನೆರವಾಗಿದೆ.